ಪರ್ಣಾಶೆ -
	ಪಾರಿಯಾತ್ರಾ ಪರ್ವತದಿಂದ ಪ್ರವಹಿಸುವ ಭಾರತವರ್ಷದ ಒಂದು ನದಿ. ಈಗ ಇದನ್ನು ಬಾಣೂಸ್ ಎನ್ನುತ್ತಾರೆ. ಶೀತಜಲವುಳ್ಳ ಈ ನದಿಗೆ ಶಿತತೋಯಾ ಎಂಬುದು ಇನ್ನೊಂದು ಹೆಸರು. ರಾಜಪುಟೌಣ ಪ್ರದೇಶದಲ್ಲಿ ಹರಿದು ಚರ್ಮಣ್ವತೀ ನದಿಗೆ (ಚಂಬಲ್) ಸೇರುತ್ತದೆ. ವರುಣ ಈಕೆಯಿಂದ ಶ್ರುತಾಯುಧನೆಂಬ ಮಗನನ್ನು ಪಡೆದ. ತನ್ನ ಮಗ ಎಂಥ ಶತ್ರುಗಳಿಂದಲೂ ಅವಧ್ಯನಾಗಿರಬೇಕೆಂಬ ವರವನ್ನು ಪಾಲಿಸಬೇಕೆಂದು ಪರ್ಣಾಶೆ ಪತಿಯನ್ನು ಬೇಡಿದಳು. ವರುಣ ಒಂದು ದಿವ್ಯಾಸ್ತ್ರವನ್ನು ಕೊಟ್ಟು ಅಮರತ್ವ ಸಾಧ್ಯವಿಲ್ಲದಿದ್ದರೂ ಈತ ಶತ್ರುಗಳಿಗೆ ದುರ್ಜಯನಾಗುತ್ತಾನೆ ಎಂದು ಹೇಳಿದ. ಅಲ್ಲದೆ ಯುದ್ಧಮಾಡದಿದ್ದರೂ ಮೇಲೆ ಈ ಅಸ್ತ್ರವನ್ನೂ ಪ್ರಯೋಗಿಸಿದರೆ ಪ್ರಯೋಗಿಸಿದವರೇ ಹತರಾಗುತ್ತಾರೆ ಎಂದೂ ಹೇಳಿದ. ಮಹಾಭಾರತ ಯುದ್ಧದಲ್ಲಿ, ಸಾರಥಿಯಾದ ಶ್ರೀಕೃಷ್ಣನ ಮೇಲೆ ಈ ಅಸ್ತ್ರ ಪ್ರಯೋಗಮಾಡಿ ಹಿಂದಿರುಗಿ ಬಂದ ಆ ಅಸ್ತ್ರದಿಂದಲೇ ಶ್ರುತಾಯುಧ ಹತನಾದ ಮಹಾಭಾರತದ ಸಭಾ ಭೀಷ್ಮ ಹಾಗೂ ದ್ರೋಣ ಪರ್ವಗಳಲ್ಲಿ ಈ ವಿಷಯಬಂದಿದೆ.

	2. ಸತ್ವತನ ಮಗನಾದ ದೇವವೃಧ ಶ್ರೇಷ್ಢನಾದ ಮಗನನ್ನು ಪಡೆಯಲು ಪರ್ಣಾಶಾ ನದಿಯ ತೀರದಲ್ಲಿ ಅತ್ಯುಗ್ರವಾದ ತಪಸ್ಸನ್ನು ಮಾಡುತ್ತಿದ್ದ. ಅತಿ ಕಠಿಣವಾದ ಅವನ ತಪಸ್ಸನ್ನು ನೋಡಲಾರದೆ ಪರ್ಣಾಶೆ ಆತನ ಪತ್ನಿಯಾದಳು. ಈಕೆಯಿಂದಲೇ ದೇವವೃಧ ದೇವತೆಗಳಿಗೆ ಸಮಾನವಾದ ಬಭು ಎಂಬ ಮಗನನ್ನು ಪಡೆದ. ಈ ವೃತ್ತಾಂತ ಹರಿವಂಶದಲ್ಲಿದೆ.           (ಡಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ